ಕನ್ನಡ ನಾಡು | Kannada Naadu

 ಅಕ್ಷರದಲ್ಲಿ ಸತ್ಯಶೋಧನೆ ನಡೆಸಿ, ಕನ್ನಡಕ್ಕೆ ಸತ್ಯದ ಕನ್ನಡಿ ಹಿಡಿದ ಸಾಹಿತ್ಯ ಲೋಕದ ದಿಗ್ಗಜ ಡಾ|| ಎಸ್.ಎಲ್. ಭೈರಪ್ಪಗೆ ಅಂತಿಮ ನಮನ

24 Sep, 2025

ಕನ್ನಡ ಸಾಹಿತ್ಯ ಲೋಕಕ್ಕೆ ಅಳಿಯದ ಗುರುತು ಬಿಟ್ಟಿರುವ ಪ್ರಖ್ಯಾತ ಕಾದಂಬರಿಕಾರ, ಹಿರಿಯ ಚಿಂತಕ, ಸಂಶೋಧಕ ವಾಗ್ಮಿ, ಸರಸ್ವತಿಪುತ್ರ ಡಾ. ಎಸ್.ಎಲ್. ಭೈರಪ್ಪ ಅವರು ಇಂದು ನಮ್ಮನ್ನಗಲಿದ್ದಾರೆ. ಕನ್ನಡ ಓದುಗರ ಮನಸ್ಸನ್ನು ಆಳಿದ ಅವರ ಕಾದಂಬರಿಗಳು, ವಿಚಾರಪೂರ್ಣ ಪ್ರಬಂಧಗಳು ಹಾಗೂ ನಿಖರವಾದ ಅಭಿಪ್ರಾಯಗಳು ಇನ್ನು ಮುಂದೆ ಕೇವಲ ಪುಸ್ತಕಗಳಲ್ಲಿ ಮಾತ್ರ ಉಳಿಯಲಿವೆ ಎಂಬ ವಿಚಾರ ಕನ್ನಡಿಗರ ಹೃದಯವನ್ನು ತಟ್ಟಿ ಮನಸ್ಸು ಆರ್ದಗಿಳಿಸುತ್ತಿದೆ. ಪತ್ರಕರ್ತನಾಗಿ, ಅವರ ಅಭಿಮಾನಿಯಾಗಿ, ಅವರೊಂದಿಗೆ ಅನೇಕ ಬಾರಿ ಮಾತನಾಡಿದ ಒಬ್ಬನಾಗಿ, ಅವರ ನಿಧನದ ಸುದ್ದಿ ನನಗೆ ವೈಯಕ್ತಿಕವಾಗಿಯೂ ಆಘಾತವನ್ನುಂಟು ಮಾಡಿದೆ. ಅವರು ಕೇವಲ ಸಾಹಿತಿಯಾಗಿರಲಿಲ್ಲ, ಬದಲಿಗೆ ಒಂದು ಕಾಲಘಟ್ಟದ ಧ್ವನಿಯಾಗಿದ್ದರು.

ನಾನು ಕಂಡ ಅಪ್ರತಿಮ ಬರಹಗಾರ

ಪತ್ರಕರ್ತನಾಗಿ ನನ್ನ ವೃತ್ತಿಜೀವನದಲ್ಲಿ ನಾನು ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ. ಆದರೆ ಡಾ. ಎಸ್.ಎಲ್. ಭೈರಪ್ಪ ಅವರೊಂದಿಗಿನ ಒಡನಾಟ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಅವರ ಮತ್ತು ನನ್ನ ನಡುವಿನ ಸಂಬಂಧ ಕೇವಲ ಸಂದರ್ಶಕ ಮತ್ತು ಸಂದರ್ಶಿತನದ್ದಾಗಿರಲಿಲ್ಲ, ಅದು ಒಂದು ಆಪ್ಯಾಯಮಾನವಾದ ಆಪ್ತತೆಯಾಗಿತ್ತು. ನನಗೆ ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಾಗ, ಅಥವಾ ಸಂದೇಹಗಳು ಕಾಡಿದಾಗ, ನಾನು ಅವರನ್ನು ಸಂಪರ್ಕಿಸುತ್ತಿದ್ದೆ. ಅವರು ಎಂದಿಗೂ ಮುಕ್ತ ಮನಸ್ಸಿನಿಂದ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆ ಮಾತುಗಳು ಕೇವಲ ಮಾಹಿತಿ ನೀಡುತ್ತಿರಲಿಲ್ಲ, ಬದಲಿಗೆ ವಿಮರ್ಶಾತ್ಮಕ ಚಿಂತನೆಗೆ ಪ್ರೇರೇಪಿಸುತ್ತಿದ್ದವು.

ಅವರೊಂದಿಗೆ ನಾನು ವಿಶೇಷ ಸಂದರ್ಶನಕ್ಕಾಗಿ ಮೈಸೂರಿನಲ್ಲಿರುವ ಅವರ ಮನೆಗೆ ತೆರಳಿದ್ದೆ. ಆ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಅದೆಷ್ಟೋ ಪ್ರಶ್ನೆಗಳು ಸುಳಿದಾಡುತ್ತಿದ್ದವು. ಅವರು ತಾವು ಬದುಕನ್ನು ಅರಿತು, ಜಗತ್ತನ್ನು ಅರ್ಥಮಾಡಿಕೊಂಡು ಬರೆದ ಮಹಾನ್ ಕೃತಿಗಳ ಹಿಂದಿರುವ ಪರಿಶ್ರಮ, ಸಂಶೋಧನೆಗಳ ಕುರಿತು ಮಾತನಾಡುತ್ತಿದ್ದರು. ಅವರ ಬಾಯಿಂದ ಬಂದ ಪ್ರತಿಯೊಂದು ಮಾತು ದಾಖಲಾರ್ಹವಾಗಿತ್ತು. ಯಾವುದೇ ಮಾತನ್ನಾಡುವ ಮೊದಲು ಅದಕ್ಕೆ ಪಕ್ಕಾ ದಾಖಲೆ ಇಲ್ಲದೆ ಅವರು ಮಾತನಾಡುತ್ತಿರಲಿಲ್ಲ. ಅವರ ಮಾತುಗಳಲ್ಲಿ ದೃಢತೆ, ನೇರ ನುಡಿ ಮತ್ತು ಅಳುಕಿರದ ವ್ಯಕ್ತಿತ್ವ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕನ್ನಡ ಭಾಷೆಯ ಪ್ರಾಚೀನತೆ ಮತ್ತು ಕನ್ನಡಕ್ಕೆ ಸಂಸ್ಕೃತದ ಕೊಡುಗೆಯ ಬಗ್ಗೆ ಅವರು ಮಾತನಾಡಿದ ರೀತಿ ನನ್ನನ್ನು ಬೆರಗುಗೊಳಿಸಿತು. ಪ್ರಾಕೃತ ಭಾಷೆಯಿಂದ ನವಗನ್ನಡದವರೆಗೆ ಭಾಷೆಯ ಹಾದಿಯನ್ನು ಅವರು ವಿವರಿಸಿದಾಗ, ಅದು ಕೇವಲ ಇತಿಹಾಸದ ಪಾಠವಾಗಿರದೆ, ಒಂದು ಸಂಶೋಧಕನ ಅನುಭವವಾಗಿ ನನ್ನ ಹೃದಯಕ್ಕೆ ತಟ್ಟಿತ್ತು.

ಸಾಹಿತ್ಯ ಪ್ರವಾಸ ಮತ್ತು ಸಾಧನೆಯ ಶಿಖರ

ಡಾ. ಎಸ್.ಎಲ್. ಭೈರಪ್ಪ, ಇವರ ಪೂರ್ಣ ಹೆಸರು ʻಸಂತೇಶಿವರ ಲಿಂಗಣ್ಣಯ್ಯ ಭೈರಪ್ಪʼ. 1931ರಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರದಲ್ಲಿ ಜನಿಸಿದ ಇವರು, ಬಾಲ್ಯದಲ್ಲಿ ಬಡತನ ಮತ್ತು ಪ್ಲೇಗ್ ಮಾರಿಯಂತಹ ಕಷ್ಟಗಳನ್ನು ಎದುರಿಸಿ ಬೆಳೆದರು. ಆದರೆ ಅವರ ಅಧ್ಯಯನ, ಪರಿಶ್ರಮ ಮತ್ತು ವಿಚಾರದ ಹಂಬಲ ಅವರನ್ನು ಭಾರತದ ಪ್ರಮುಖ ಚಿಂತಕರ ಸಾಲಿಗೆ ಸೇರಿಸಿತು. ಅವರು ತಮ್ಮ ಎಂ.ಎ. ಪದವಿಯಲ್ಲಿ ಸುವರ್ಣ ಪದಕ ಗಳಿಸಿದ್ದು, ನಂತರ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ "ಸತ್ಯ ಮತ್ತು ಸೌಂದರ್ಯ" ಎಂಬ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವವಿದ್ಯಾಲಯ, ಮತ್ತು ದೆಹಲಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ತಮ್ಮ ಪಾಂಡಿತ್ಯವನ್ನು ಮತ್ತಷ್ಟು ವೃದ್ಧಿಸಿಕೊಂಡರು.

"ಧರ್ಮಶ್ರೀʼಯಿಂದ ಪ್ರಾರಂಭವಾದ ಅವರ ಕಾದಂಬರಿ ಜೀವನದಲ್ಲಿ ಒಟ್ಟು 21 ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ "ವಂಶವೃಕ್ಷ", "ಗೃಹಭಂಗ", "ಪರ್ವ", "ಸಾರ್ಥ", "ಸಾಕ್ಷಿ", "ಆವರಣ" ಮತ್ತು ಅವರ ಕೊನೆಯ ಕಾದಂಬರಿ "ತಿಮ್ಮನ ಕಿತ್ತೂರು" ಪ್ರಮುಖವಾಗಿವೆ. ಅವರ ಬರಹಗಳ ಶಕ್ತಿಯೇ ಅವರ ಸರಳವಾದರೂ ತೀಕ್ಷ್ಣವಾದ ಭಾಷೆ. ಓದುಗರನ್ನು ಚಿಂತನೆಗೆ ಹಚ್ಚುವ ಶಕ್ತಿ ಅವರ ಸಾಹಿತ್ಯದಲ್ಲಿತ್ತು. ಅವರ ಕೃತಿಗಳು ಕನ್ನಡದ ಜೊತೆಗೆ ಇಂಗ್ಲಿಷ್ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಓದುಗರನ್ನು ಸಂಪಾದಿಸಿವೆ. ಅವರ ಕಾದಂಬರಿಗಳಾದ 'ವಂಶವೃಕ್ಷ', 'ತಬ್ಬಲಿಯು ನೀನಾದೆ ಮಗನೆ', 'ಮತದಾನ' ಮತ್ತು 'ನಾಯಿ ನೆರಳು' ಚಲನಚಿತ್ರಗಳಾಗಿವೆ, ಹಾಗೂ 'ಗೃಹಭಂಗ' ಮತ್ತು 'ದಾಟು' ಕಾದಂಬರಿಗಳು ಟಿ.ವಿ. ಧಾರಾವಾಹಿಗಳಾಗಿವೆ. ʻಭಿತ್ತಿʼ ಎನ್ನುವ ಆತ್ಮ ಚರಿತೆಯನ್ನು ನೀಡಿದರು. 

ಅವರ ಹಾದಿಯನ್ನು ಹಲವಾರು ಪ್ರಶಸ್ತಿಗಳು ಅಲಂಕರಿಸಿವೆ: 1975ರಲ್ಲಿ 'ದಾಟು' ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1999ರಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 2005ರಲ್ಲಿ ಪಂಪ ಪ್ರಶಸ್ತಿ, 2010ರಲ್ಲಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್, 2011ರಲ್ಲಿ ನಾಡೋಜ ಪ್ರಶಸ್ತಿ, ಮತ್ತು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ. ಈ ಪ್ರಶಸ್ತಿಗಳು ಕೇವಲ ಗೌರವಗಳಾಗಿರದೆ, ಅವರ ಶ್ರಮ ಮತ್ತು ಪ್ರತಿಭೆಗೆ ಸಂದ ಸತ್ಯದ ಫಲಗಳಾಗಿವೆ.

ಜನಮನ್ನಣೆ ಮತ್ತು ವಿವಾದ: ದೃಢ ನಿಲುವು

ಭೈರಪ್ಪರು ಓದುಗರ ಮನಸ್ಸಿನಲ್ಲಿ ಅಪಾರ ಜನಪ್ರಿಯರಾಗಿದ್ದರೂ, ಅವರ ಬರಹಗಳು ಮತ್ತು ನೇರ ಮಾತುಗಳು ಅನೇಕ ಬಾರಿ ವಿವಾದಗಳಿಗೆ ಕಾರಣವಾಗಿವೆ. ವಿಶೇಷವಾಗಿ “ಆವರಣ” ಮತ್ತು “ಸಾರ್ಥ” ಕಾದಂಬರಿಗಳು ಸಮಾಜದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದವು. ಇತಿಹಾಸ, ಧರ್ಮ ಮತ್ತು ಸಮಾಜದ ಸೂಕ್ಷ್ಮ ಪ್ರಶ್ನೆಗಳನ್ನು ಅವರು ಧೈರ್ಯದಿಂದ ಎದುರಿಸಿದರು. ಆದರೆ ಯಾವುದೇ ಟೀಕೆ, ವಿರೋಧ ಎದುರಾದರೂ “ನಾನು ಬರೆದದ್ದು ನನ್ನ ಶೋಧನೆಯ ಫಲ, ಅದರಲ್ಲಿ ನಾನು ಹಿಂದೆ ಸರಿಯುವುದಿಲ್ಲ” ಎಂಬ ದೃಢ ನಿಲುವಿನಲ್ಲಿ ಅವರು ಅಚಲವಾಗಿ ನಿಂತಿದ್ದರು.

ಅವರ ಪುಸ್ತಕಗಳು ಲಕ್ಷಾಂತರ ಪ್ರತಿಗಳಲ್ಲಿ ಮಾರಾಟವಾದವು. ಕನ್ನಡ ಓದುಗರಲ್ಲಿ ಕಾದಂಬರಿ ಓದುವ ಸಂಸ್ಕೃತಿಯನ್ನು ಬೆಳೆಸಿದ ಕೀರ್ತಿ ಭೈರಪ್ಪರಿಗೆ ಸೇರಿದೆ. ವಿದ್ಯಾವಂತರು, ಸಾಮಾನ್ಯರು - ಎಲ್ಲರಿಗೂ ಹತ್ತಿರವಾದ ಕೃತಿಗಳನ್ನು ಅವರು ಬರೆದಿದ್ದಾರೆ.

ಇಂದು ಅವರು ಅಗಲಿದರೂ, ಅವರ ಕೃತಿಗಳು ಮುಂದಿನ ಪೀಳಿಗೆಗಳಿಗೆ ಪ್ರೇರಣೆ, ಚಿಂತನೆ ಮತ್ತು ವಿಚಾರಧಾರೆಗಳ ಬಿತ್ತನೆ ಮಾಡುತ್ತಲೇ ಇರುತ್ತವೆ. ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಭೈರಪ್ಪರು ಶಾಶ್ವತ ದೀಪಸ್ತಂಭರಾಗಿ ಉಳಿಯಲಿದ್ದಾರೆ. ಕನ್ನಡ ಸಾಹಿತ್ಯ ಪ್ರಪಂಚವು ತನ್ನ ಅತ್ಯಂತ ಪ್ರಭಾವಿ ಕಾದಂಬರಿಕಾರರಲ್ಲಿ ಒಬ್ಬರನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿರುವ ಈ ಕ್ಷಣದಲ್ಲಿ, ಅವರ ಹೆಸರನ್ನು ಗೌರವದಿಂದ ಸ್ಮರಿಸುವುದೇ ನಿಜವಾದ ನಮನ.

ಶ್ರೀನಾಥ್‌ ಜೋಶಿ ಸಿದ್ದರ

9060188081

 

Publisher: ಕನ್ನಡ ನಾಡು | Kannada Naadu

Login to Give your comment
Powered by